ರೂಸೋ, ಜೀನ್ ಜಾಕ್ಸ್
1712-78. ಫ್ರಾನ್ಸ್ ದೇಶದ ದಾರ್ಶನಿಕ ಬರೆಹಗಾರ. ಈ ಕಾಲದ ಪ್ರಭಾವಶಾಲಿಯಾದ ಕತೆಗಾರನೂ ಹೌದು. ಈತನ ಬರೆಹಗಳು ಫ್ರಾನ್ಸಿನ ಮಹಾಕ್ರಾಂತಿಯ ಮೇಲೆ ಮಾತ್ರವಲ್ಲದೆ ಅದಕ್ಕೂ ಮೊದಲೇ ನಡೆದ ಅಮೆರಿಕದ ಸ್ವಾತಂತ್ರ್ಯ ಹೋರಾಟದಲ್ಲೂ ವಿಶೇಷ ಪರಿಣಾಮವನ್ನುಂಟು ಮಾಡಿದುವು. 

  ಇಷ್ಟಾದರೂ ಈತ ಫ್ರಾನ್ಸ್ ಸಂಜಾತನಲ್ಲ. ಈತ ಜಿನೀವದಲ್ಲಿ ಗಡಿಯಾರ ರಿಪೇರಿ ಮಾಡುತ್ತಿದ್ದ ಒಬ್ಬ ಬಡವನ ಮಗ. ತಾಯಿ ಬಾಲ್ಯದಲ್ಲಿಯೇ ಮೃತಪ ಟ್ಟಳು. ಈತನ ವಿದ್ಯಾಭ್ಯಾಸ ಬಂಧುಗಳ ಸಹಾಯದಿಂದ ನಡೆಯಿತು. ಬಾಲ್ಯದಲ್ಲಿ ಅನೇಕ ಕಷ್ಟಗಳನ್ನು ಅನು ಭವಿಸಿದ. ಆದರೆ ಇದೇ ಕಾಲದಲ್ಲಿ ಸ್ವಾಭಿಮಾನ, ಸ್ವಾತಂತ್ರ್ಯಾಭಿಮಾನ ಈತನ ಮನಸ್ಸಿನಲ್ಲಿ ಬೇರೂರಲಾರಂಭಿಸಿದುವು. ಇದರಿಂದಾಗಿ ಒಂದೇ ಕೆಲಸದಲ್ಲಿ ಸ್ಥಿರವಾಗಿ ನಿಲ್ಲಲಾಗದೆ ಹೋದ. ಚಿತ್ರ ಕೆಲಸಗಾರ, ಲಾಯರ್, ಮತಬೋಧಕ, ಸಂಗೀತಗಾರ ಇತ್ಯಾದಿ ಹಲವು ವಿಧದಲ್ಲಿ ಜೀವನವನ್ನು ರೂಪುಗೊಳಿಸಲು ಯತ್ನಿಸಿದ. ಕೊನೆಗೆ ಫ್ರಾನ್ಸ್ ದೇಶದಲ್ಲಿ ಇವನಿಗೆ ಮ್ಯಾಡಮ್ ಡಿ ವಾರೆನ್ಸ್ ಎಂಬ ಒಬ್ಬ ಯುವವಿಧವೆ ಆಶ್ರಯಕೊಟ್ಟಳು. ಅವಳ ಸಹಾಯದಿಂದ ಲ್ಯಾಟಿನ್ ಭಾಷೆ ಮತ್ತು ತತ್ತ್ವಶಾಸ್ತ್ರ ಕಲಿತ. ವಾಲ್ಟೇರ್‍ನ ಬರೆಹಗಳನ್ನು ಇದೇ ಕಾಲದಲ್ಲಿ ಚೆನ್ನಾಗಿ ಪರಿಶೀಲಿಸಿದ. ಸೃಷ್ಟಿಸೌಂದರ್ಯ ಈತನ ಮನಸ್ಸನ್ನು ಬಲವಾಗಿ ಆಕರ್ಷಿಸಿತು. 
ತನ್ನ 29ನೆಯ ವಯಸ್ಸಿನಲ್ಲಿ ಜೀವನೋಪಾಯದ ಮಾರ್ಗಕಾಣಲು ಪ್ಯಾರಿಸ್ಸಿಗೆ ಬಂದ. ಈ ನಗರದಲ್ಲಿ ಈತನಿಗೆ ಅನೇಕ ಬರೆಹಗಾರರೂ ಯುವತಿಯರೂ ಸ್ನೇಹಿತರಾದರು. ಸ್ವಲ್ಪ ಕಾಲಾನಂತರ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಥೆರಸೆ ಎಂಬ ವಿದ್ಯಾವತಿ ಹಾಗೂ ಸರಳ ಸ್ವಭಾವದ ಯುವತಿಯೊಬ್ಬಳು ಈತನಿಗೆ ಆಶ್ರಯಕೊಟ್ಟಳು. ತನ್ನ ಜೀವಿತದ ಹೆಚ್ಚುಕಾಲವನ್ನು ಇವಳ ಜೊತೆಯಲ್ಲಿ ಕಳೆದ.

ಬರೆಹಗಾರನಾಗುವ ಅವಕಾಶ ಈತನಿಗೆ ದೊರೆತುದು 38ನೆಯ ವರ್ಷದಲ್ಲಿ. ಡಿಡೆರೊ ಎಂಬಾತ ತಯಾರಿಸುತ್ತಿದ್ದ ವಿಶ್ವಕೋಶಕ್ಕೆ ಈತನ ಬರೆಹಗಳು ಆರಿಸಲ್ಪಟ್ಟಾಗ ಈತನ ಕೀರ್ತಿ ಹರಡಲಾರಂಭಿಸಿತು. ಅನಂತರ ಜೂಲೀ ಎಂಬ ಕಥೆ ಬರೆದ.

ಈತನ ಮುಖ್ಯವಾದ ಗ್ರಂಥ ದ ಸೋಷಿಯಲ್ ಕಾಂಟ್ರಾಕ್ಟ್ (1762). ಇದರ ಮೊದಲನೆಯ ವಾಕ್ಯವೇ ಜನರ ಮನಸ್ಸನ್ನು ಆಕರ್ಷಿಸಿತು. ಮಾನವ ಸ್ವತಂತ್ರನಾಗಿ ಜನಿಸಿದರೂ ಆತ ಶೃಂಖಲಾಬದ್ಧನಾಗಿದ್ದಾನೆ. ಲಾಕ್‍ನ ತತ್ತ್ವಗಳನ್ನು ಈತ ಬಳಸಿಕೊಂಡ. ಸರ್ಕಾರದ ಬುನಾದಿ ಯಾವಾಗಲೂ ಜನರ ಸಮ್ಮತಿಯೇ ಹೊರತು, ಬಲಾತ್ಕಾರವಲ್ಲ; ಸರ್ಕಾರ ನಡೆಸುವವರು ಅಧಿಕಾರ ಸ್ಥಾನದಲ್ಲಿದ್ದರೂ ತಮ್ಮನ್ನು ಜನರ ಪ್ರಭುಗಳೆಂದು ತಿಳಿಯದೆ, ಅವರ ಸೇವಕರೆಂದೇ ಭಾವಿಸಬೇಕು. ಜನರೇ ದೇಶದ ಮುಖ್ಯ ಮತ್ತು ನಿಜವಾದ ಅಧಿಕಾರಿಗಳು ಎಂಬ ಈತನ ತತ್ತ್ವ ಪ್ರತಿಪಾದನೆ ಫ್ರಾನ್ಸಿನ ಕ್ರಾಂತಿ ನಡೆದ ತರುವಾಯ ಪ್ರಜಾಸತ್ತಾತ್ಮಕ ಸರ್ಕಾರದ ಬೆಳೆವಣಿಗೆಗೆ ತಳಹದಿಯಾಯಿತು.

ರೂಸೋ ತನ್ನ ಕಾಲದ ಮತ್ತು ದೇಶದ ಸುಪ್ರಸಿದ್ಧ ಕತೆಗಾರ. ಪ್ರಕೃತಿ ಸೌಂದರ್ಯದ ಪ್ರಶಂಸೆ ಮತ್ತು ವರ್ಣನೆಯಲ್ಲಿಯೂ ಸ್ವಾತಂತ್ರ್ಯಕ್ಕಾ ಗಿ ಬರೆಹಗಳ ಮೂಲಕ ಶ್ರಮಿಸುವುದರಲ್ಲಿಯೂ ಅಗ್ರಸ್ಥಾನ ಪಡೆದಿದ್ದಾನೆ ಎಂದು ಇತಿಹಾಸಕಾರ ಎಚ್.ಜಿ.ವೇಲ್ಸ್ ಇವನನ್ನು ಕುರಿತು ಹೇಳಿದ್ದಾನೆ. ಎಮಿಲಿ ಮತ್ತು ಪಾಪನಿವೇದನೆಗಳು (ಕನ್‍ಫೆಷನ್ಸ್) ಇವನ ಇತರ ಕೃತಿಗಳು.
1760ರಲ್ಲಿ ಡೇವಿಡ್ ಹ್ಯೂಮ್ ಎಂಬ ಇಂಗ್ಲೆಂಡಿನ ತತ್ತ್ವಜ್ಞ ಈತನನ್ನು ಬರಮಾಡಿಕೊಂಡು ಅಪಾರವಾಗಿ ಗೌರವಿಸಿದ. ಇದರ ಫಲವಾಗಿ ಇಂಗ್ಲೆಂಡಿನ ದೊರೆ 3ನೆಯ ಜಾರ್ಜ್ ಇವನಿಗೆ ವಿಶೇಷ ನಿವೃತ್ತಿ ವೇತನಕ್ಕೆ ಆಜ್ಞೆ ಮಾಡಿದ. ಆದರೆ ಸ್ವಲ್ಪ ಕಾಲದಲ್ಲಿಯೇ ಅತ್ಯಂತ ಸ್ವಾಭಿಮಾನ ಮತ್ತು ಪರರ ಮೇಲಿನ ಶಂಕೆಯ ಫಲವಾಗಿ, ಹ್ಯೂಮ್‍ನ ಜೊತೆಗೆ ಮನಸ್ತಾಪ ಕಟ್ಟಿಕೊಂಡು ಈತ ಫ್ರಾನ್ಸಿಗೆ ಹಿಂದಿರುಗಿದ. 

ಈತ ಎಮೆನಸ್‍ವಿಲ್ಲೆ ಎಂಬಲ್ಲಿ 1778ರಲ್ಲಿ ನಿಧನನಾದ. ಇಲ್ಲಿ ಸೊಗಸಾದ ತೋಟಗಳ ಮಧ್ಯೆ ಈತನ ಸಮಾಧಿ ನಿರ್ಮಿತವಾಗಿದೆ.
							(ಬಿ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ